Friday, Mar 29 2024 | Time 03:40 Hrs(IST)
Karnataka Share

ಬಗರ್‌ಹುಕುಂ, ಅರಣ್ಯವಾಸಿಗಳ ಹಿತ ರಕ್ಷಣೆಗೆ ಬದ್ಧ; ಮಧು ಬಂಗಾರಪ್ಪ

ಬಗರ್‌ಹುಕುಂ, ಅರಣ್ಯವಾಸಿಗಳ ಹಿತ ರಕ್ಷಣೆಗೆ ಬದ್ಧ; ಮಧು ಬಂಗಾರಪ್ಪ
MADHAU BANGARAPPA

(ವಿಶೇಷ ವರದಿ ; ರಾಚಪ್ಪ, ಸುತ್ತೂರು)

ಶಿವಮೊಗ್ಗ, ಏ 20 (ಯುಎನ್ಐ) ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದು ಎರಡನೆ ಹಂತದ ಚುನಾವಣೆಗೆ 14 ಲೋಕಸಭಾ ಕ್ಷೇತ್ರಗಳ ಕದನ ರಂಗೇರಿಗೆ.

ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾದ ಶಿವಮೊಗ್ಗದಲ್ಲಿ ಚುನಾವಣಾ ಕಾವು ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಡುವೆ ಬಿರುಸಿನ ಪೈಪೋಟಿ ಕಂಡು ಬಂದಿದೆ.

ಇಬ್ಬರ ನಡುವಿನ ಪೈಪೋಟಿ ಹೇಗಿದೆ, ಚುನಾವಣಾ ಲೆಕ್ಕಾಚಾರಗಳೇನು ಎಂಬುದರ ಬಗ್ಗೆ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ 'ಯುಎನ್ಐ' ಕನ್ನಡ ಸುದ್ದಿ ಸಂಸ್ಥೆಗೆ ವಿಶೇಷ ಸಂದರ್ಶನ ನೀಡಿದ್ದಾರೆ.

• ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಹೇಗಿದೆ..?

ಚುನಾವಣಾ ಪ್ರಚಾರ ತುಂಬಾ ಚೆನ್ನಾಗಿ ನಡೆಯುತ್ತಿದೆ. ಸಂತೋಷವಾಗಿ ಪ್ರಚಾರ ಮಾಡುತ್ತಿದ್ದೇವೆ. ಭದ್ರಾವತಿಯಲ್ಲಿ ಸ್ಪಲ್ಪ ಗೊಂದಲ ಇತ್ತು. ಎರಡು ದಿನ ಕ್ಷೇತ್ರದಲ್ಲಿ ಸಭೆ ನಡೆಸಿದ ಬಳಿಕ ಅವೆಲ್ಲವೂ ಇತ್ಯರ್ಥಗೊಂಡಿವೆ.

• ಭದ್ರಾವತಿಯಲ್ಲಿ ಸಂಗಮೇಶ್ ಹಾಗೂ ಅಪ್ಪಾಜಿಗೌಡರ ನಡುವೆ ಹೊಂದಾಣಿಕೆ ಇರಲಿಲ್ಲ. ಈಗ ಸಚಿವ ಡಿ.ಕೆ.ಶಿವಕುಮಾರ್ ಸಂಧಾನ ಮಾಡುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಿದ್ದಾರೆ. ಇದು ಯಾವ ರೀತಿಯ ಪರಿಣಾಮ ಉಂಟು ಮಾಡಬಹುದು?

ಶಾಸಕರಾದ ಸಂಗಮೇಶ್ ಹಾಗೂ ಅಪ್ಪಾಜಿಗೌಡರ ನಡುವಿನ ವೈಯಕ್ತಿಕ ರಾಜಕೀಯಕ್ಕಾಗಿ ಜಿದ್ದಾ ಜಿದ್ದು ಇತ್ತು, ಅದು ಈಗ ಬಗೆ ಹರಿದಿದೆ. ತಳಮಟ್ಟದ ಕಾರ್ಯಕರ್ತರು ಮೈತ್ರಿಗೆ ಒಪ್ಪಿ ಅಸಮಾಧಾನ ಕೊನೆಗೊಳಿಸಿದ್ದಾರೆ. ಇಬ್ಬರೂ ಮಾತನಾಡಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಗೊಂದಲಗಳು ಬಗೆಹರಿದಿವೆ. ಅಪ್ಪಾಜಿಗೌಡ ಮತ್ತು ಸಂಗಮೇಶ್ ಇಬ್ಬರು ಪ್ರಮುಖ ನಾಯಕರು, ಒಟ್ಟಾಗಿ ತಮ್ಮನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆ. ಎಲ್ಲಾ ಕಾರ್ಯಕರ್ತರು ಈಗಾಗಲೇ ಪ್ರಚಾರ ನಡೆಸಿದ್ದಾರೆ. ಕಾರ್ಯಕರ್ತರಲ್ಲಿ ಮೊದಲು ಸ್ವಲ್ಪ ಹೊಂದಾಣಿಕೆ ಕಂಡು ಬಂದಿರಲಿಲ್ಲ. ಸಚಿವ ಡಿ.ಕೆ.ಶಿವಕುಮಾರ್ ಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನಿನ್ನೆ ಅವರು ನಡೆಸಿದ ಸಭೆಯಿಂದ ಎಲ್ಲವೂ ಬಗೆಹರಿದಿವೆ.

• ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕ್ಷೇತ್ರದ ಜವಾಬ್ದಾರಿ ನೀಡಿದ ಬಳಿಕ ಕ್ಷೇತ್ರದಲ್ಲಿ ಯಾವ ಬದಲಾವಣೆ ಕಂಡು ಬಂದಿದೆ ?

ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕ್ಷೇತ್ರದ ಉಸ್ತುವಾರಿ ನೀಡಿಲ್ಲ , ಜವಾಬ್ದಾರಿ ನೀಡಲಾಗಿದೆ. ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಅವರ ಮೇಲಿದೆ. ಡಿಕೆಶಿ ಅವರು ಸ್ಟ್ಯಾಡಂರ್ಡ್ ಮೊಬೈಲ್ ಇದ್ದ ಹಾಗೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.

• ಇದು ಕೂಡ ಚುನಾವಣಾ ತಂತ್ರಗಾರಿಕೆಯೆ..?

ಇದು ತಮ್ಮದೇ ಚುನಾವಣಾ ತಂತ್ರಗಾರಿಕೆ. ವಿಧಾನ ಸಭೆ ಚುನಾವಣೆಯಲ್ಲಿ ಸೋತ ಬಳಿಕ ಕುಟುಂಬ ಸಮೇತ ಸ್ವಲ್ಪ ದಿನ ಹೊರಗೆ ಇದ್ದೆ. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಗೋಡು ತಿಮ್ಮಪ್ಪ ಅವರ ಸೂಚನೆಯಂತೆ ಹಾಗೂ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯದ ಮೇರೆಗೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ನಾಮಪತ್ರ ಸಲ್ಲಿಸುವ ಮುನ್ನವೇ ಕ್ಷೇತ್ರದಲ್ಲಿ ಶೇ. 60 ರಷ್ಟು ಪ್ರಚಾರ ಮುಗಿಸಿದ್ದೇವೆ. ನಾಮಪತ್ರ ಸಲ್ಲಿಸಿದ ಬಳಿಕ 13 ದಿನ ಬಾಕಿ ಉಳಿದಿತ್ತು.

• ಅಭ್ಯರ್ಥಿಯಾಗುವ ಮೊದಲೇ ಲೋಕಸಭಾ ಚುನಾವಣೆ ತಯಾರಿ ನಡೆಸಿದ್ದೀರಿ, ಇದರಿಂದ ಯಾವ ರೀತಿಯ ಅನುಕೂಲವಾಗಲಿದೆ.?

ಉಪ ಚುನಾವಣೆಯಲ್ಲಿ ಸೋತ ಬಳಿಕ ನಾಲ್ಕು ತಿಂಗಳು ಕ್ಷೇತ್ರದಲ್ಲಿ ಕಾಣಿಸಲಿಲ್ಲ ಎಂಬ ಆರೋಪ ಇತ್ತು. ಆದರೆ ಇವೆಲ್ಲಾ ಸುಳ್ಳು. ಮಂಗನಕಾಯಿಲೆ ಬಂದಾಗ ತಾವೇ ಮುಂದೆ ನಿಂತು ಸರ್ಕಾರದ ಗಮನಕ್ಕೆ ತಂದಿದ್ದೆ. ಅರಣ್ಯ ವಾಸಿಗಳನ್ನು ಕಾಡಿನಿಂದ ಹೊರ ಹಾಕಲು ಸುರ್ಪೀಂ ಕೋರ್ಟ್‌ನಿಂದ ತೀರ್ಪು ಬಂದಾಗ ಹೋರಾಟ ಮಾಡಿದ್ದೇವೆ. ಕೊಡಗು ಪ್ರವಾಹ ಬಂದಾಗ ಪರಿಹಾರ ಕಾರ್ಯದಲ್ಲಿ ಜೆಡಿಎಸ್ ಯುವ ಘಟಕದಿಂದ ಭಾಗವಹಿಸಿದ್ದೇವೆ. ಆದರೆ ಪ್ರಚಾರ ಪಡೆದುಕೊಳ್ಳಲಿಲ್ಲ.

ಶಿವಮೊಗ್ಗ ಕ್ಷೇತ್ರದಲ್ಲಿ ಸೋತ ಬಳಿಕ ಎಂಎಲ್ ಸಿ ಮಾಡುತ್ತಾರೆ, ಮಂತ್ರಿ ಆಗುತ್ತಾರೆ ಎಂಬ ಚರ್ಚೆ ನಡೆಯಿತು. ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ ಎಂಬ ಮಾತುಗಳು ಗುಸುಗುಸು ಹರಿದಾಡುತ್ತಿದ್ದವು. ಹಾಗಿದ್ದರೆ ಚುನಾವಣೆಗೂ ಮುನ್ನವೇ ಹೋಗಬಹುದಿತ್ತು. ಪಕ್ಷ ತಮಗೆ ಮೋಸ ಮಾಡಿಲ್ಲ. ಮಾನವೀಯತೆ, ಜವಾವ್ದಾರಿ, ಗೌರವ ಉಳಿಸಿಕೊಂಡಿದ್ದೇನೆ. ಹಿಂದಿನ ಸೋಲಿಗೆ ತಾವೇ ಜವಾಬ್ದಾರಿ.

ಮುಂದಿನ ಚುನಾವಣೆ ಒಳಗೆ ನೀರಾವರಿಗೆ ಹಣ ಬಿಡುಗಡೆ ಮಾಡಬೇಕು, ಸಾಲಮನ್ನಾ ಪೂರ್ಣಗೊಳ್ಳಬೇಕು ಮುಂತಾದ ಜವಾಬ್ದಾರಿಗಳನ್ನು ಆಕಾಂಕ್ಷೆಗಳನ್ನು ಚುನಾವಣೆಗೆ ಇಳಿದಿದ್ದೇನೆ. ಕೇಂದ್ರ ಸರ್ಕಾರ ಅರಣ್ಯ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗಿದೆ. 2011ರಲ್ಲಿ ಸದಾನಂದ ಗೌಡ ಮುಖ್ಯಮಂತ್ರಿ ಆಗಿದ್ದಾಗ 192 ಕಲಂಗೆ ತಿದ್ದುಪಡಿ ತಂದರು. ಇದರಿಂದ ಅರಣ್ಯ ಒತ್ತುವರಿದಾರರಿಗೆ 1 ವರ್ಷ ಶಿಕ್ಷೆ ವಿಧಿಸುವಂತಾಯಿತು. ಬಿಜೆಪಿ ಸರ್ಕಾರವೇ ಈ ಕಾಯ್ದೆಯನ್ನು ತಂದು ಒತ್ತುವರಿದಾರರಿಗೆ ಸಮಸ್ಯೆ ಸೃಷ್ಟಿಸಿತು. ಇದುವರೆಗೂ ಒಂದು ಪ್ರಕರಣ ಕೂಡ ದಾಖಲಿಸಿಲ್ಲ. ಸುಪ್ರೀಂ ಕೋರ್ಟ್‌ ಆದೇಶದಿಂದಾಗಿ ಸಂಕಷ್ಟಕ್ಕೆ ಒತ್ತುವರಿದಾರರು ಸಿಲುಕಿದ್ದಾರೆ. ಅರಣ್ಯ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹಾಕಿದ್ದೇವೆ. ಇದರ ವಿರುದ್ಧ ರಾಜ್ಯದ ಸಂಸದರು ಹೋರಾಟ ನಡೆಸುತ್ತಿಲ್ಲ. ಹೋಗಲಿ ನಾಲ್ಕು ತಿಂಗಳಲ್ಲಿ ಏನು ಕೆಲಸ ಮಾಡಿದ್ದಾರೆ. ತಮ್ಮನ್ನು ರಾಘವೇಂದ್ರ ಇಂಪೋರ್ಟಡ್ ಎನ್ನುತ್ತಾರೆ, ಅವರನ್ನು ಜನ ಎಕ್ಸ್ ಪೋರ್ಟ್‌ ಮಾಡುತ್ತಾರೆ ನೋಡುತ್ತಿರಿ. ರಾಘವೇಂದ್ರ ಅವರ ತಂದೆ ಮಂಡ್ಯದ ಬೂಕನಕೆರೆಯವರು. ಹಗುರವಾಗಿ ಮಾತನಾಡಬೇಡಿ, ನಾನು ಸ್ಥಳೀಯ.

• ನೀರಾವರಿ ಯೋಜನೆ, ಅರಣ್ಯ ಹಕ್ಕುಗಳು, ಭದ್ರಾವತಿ ಎಂಪಿಎಂ, ಮಂಗನಕಾಯಿಲೆ ಚುನಾವಣಾ ಪ್ರಚಾರದ ವೇಳೆ ಪ್ರಸ್ತಾಪ ಆಗಿದೆಯೇ , ಈ ನಾಲ್ಕು ವಿಚಾರಗಳೇ ಇಲ್ಲಿನ ಪ್ರಮುಖ ಚುನಾವಣಾ ವಿಷಯಗಳಲ್ಲವೇ ?

ನೀರಾವರಿ ಯೋಜನೆಗಳಿಗೆ ಮೈತ್ರಿ ಸರ್ಕಾರ 600 ಕೋಟಿ ರೂ. ಘೋಷಿಸಿದೆ. ಯಡಿಯೂರಪ್ಪ ಜಿಲ್ಲೆಯ ನೀರಾವರಿ ಯೋಜನೆಗೆ ಎಷ್ಟು ಹಣ ಕೊಟ್ಟಿದ್ದಾರೆ ? ಎಷ್ಟು ಸಲ ಪಾದಯಾತ್ರೆ ಮಾಡಿ ಹೋರಾಟ ಮಾಡಿದ್ದಾರೆ ?

ಅರಣ್ಯ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಕೆಲಸ ರಾಜ್ಯದ ಕಂದಾಯ ಇಲಾಖೆಯಿಂದ ನಡೆದಿದೆ. 6000ಕ್ಕೂ ಅಧಿಕ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ ತರಬೇಕು. ಕೇಂದ್ರ ಸರ್ಕಾರಕ್ಕೆ ಸಂಸದರು ಒತ್ತಡ ತಂದು ಕೆಲಸ ಮಾಡಿಸಬೇಕು. ನನ್ನನ್ನು ಸಂಸದರನ್ನಾಗಿ ಆಯ್ಕೆ ಮಾಡಿ ಕಳುಹಿಸಿದರೆ ಇದರ ಬಗ್ಗೆ ಹೋರಾಡುತ್ತೇನೆ. ಕಸ್ತೂರಿ ರಂಗನ್ ವರದಿ ವಜಾಗೊಳಿಸಬೇಕು. ಸಿದ್ದರಾಮಯ್ಯ ಸರ್ಕಾರದಲ್ಲಿ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದೆವು. ಮೈತ್ರಿ ಸರ್ಕಾರವೂ ಇದೇ ನಿಲುವು ತೆಗೆದುಕೊಂಡಿದೆ.

17 ಸಂಸದರಲ್ಲಿ 14 ಸಂಸದರು ಮಲೆನಾಡಿಗೆ ಸೇರಿದವರು. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಮೈಸೂರು-ಕೊಡಗು, ಶಿವಮೊಗ್ಗ, ದಾವಣಗೆರೆ, ಬೆಳಗಾವಿಯಲ್ಲಿ ಬಿಜೆಪಿ ಸಂಸದರಿದ್ದು, ಇದುವರೆಗೂ ಹೋರಾಟ ನಡೆಸಿಲ್ಲ. ಮಲೆನಾಡಿನ ಜನರನ್ನು ಒಕ್ಕಲೆಬ್ಬಿಸಲು ಇವರೇ ಸಂಚು ರೂಪಿಸಿದ್ದಾರೆ. ಅಡಿಕೆ ವಿಷಕಾರಿ, ಕ್ಯಾನ್ಸರ್ ಕಾರಕ ಎಂದು ಸುಪ್ರೀಂ ಕೋರ್ಟಿಗೆ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಬಿಜೆಪಿಯವರು ಏಕೆ ಮಾತನಾಡುತ್ತಿಲ್ಲ ?

ಯಡಿಯೂರಪ್ಪ ಅವರನ್ನೇ ಲಾಂಚ್ ಮಾಡಬೇಕಿದೆ. ಪುನಶ್ಚೇತನ ಮಾಡಬೇಕಿದೆ. ಹಾಯಾ ಬ್ರಿಡ್ಜ್, ಗುಡವಿಯಲ್ಲಿ ವರದಾ ನದಿಗೆ ಸೇತುವೆ, ಹಲಸಿನಕೊಪ್ಪ ಸೇತುವೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಮಧು ಬಂಗಾರಪ್ಪ ಅವರ ಕೋರಿಕೆ ಮೇರೆಗೆ ನಾಲ್ಕು ಸೇತುವೆ ಅನುಮೋದನೆ ನೀಡಿದ್ದಾರೆ. ಚುನಾವಣೆ ಬಳಿಕ ಎಲ್ಲಿದ್ದೀಯಪ್ಪಾ ಎಂದು ಕೇಳುತ್ತಾರೆ.

• ಕೇಂದ್ರ ಸರ್ಕಾರದಿಂದ ಒಂದೂ ಯೋಜನೆ ತಂದಿಲ್ಲವೇಕೆ.?

ಕೇಂದ್ರ ಸರ್ಕಾರದಿಂದ ಕ್ಷೇತ್ರಕ್ಕೆ ಯಾವ ಯೋಜನೆ ತಂದಿದ್ದೀರಿ. ವಿಮಾನ ನಿಲ್ದಾಣ ಎಲ್ಲಿಗೆ ಬಂದಿದೆ. ತಾಳುಗುಪ್ಪದವರೆಗೆ ಹಳಿ ಹಾಕಿಸಿದ್ದು ಬಂಗಾರಪ್ಪ ಅವರು, ಅದಕ್ಕೆ ರೈಲು ಓಡಿಸಿದರು. ಶಿಕಾರಿಪುರದಿಂದ ಹುಬ್ಬಳ್ಳಿ, ದಾವಣಗೆರೆಗೆ ಸಂಪರ್ಕ ಕೊಂಕಣ್ ರೈಲು ಬಿಟ್ಟಿದ್ದಾರೆ. ನರೇಂದ್ರ ಮೋದಿ ಮುಖ ತೋರಿಸಿ ಮತಹಾಕಿ ಎನ್ನುತ್ತಿದ್ದಾರೆ. ನಿಮಗೆ ಯೋಗ್ಯತೆ ಇಲ್ಲವೇ..ನೀವು ಯಾವ ಸಾಧನೆ ಮಾಡಿದ್ದೀರಿ.

• ಮೈತ್ರಿ ಅಭ್ಯರ್ಥಿ ಗೆಲ್ಲಿಸಿದರೆ ಪ್ರಯೋಜನವಿಲ್ಲ. ಬಿಜೆಪಿ ಸರ್ಕಾರ ಬೆಂಬಲಿಸಿ ಎನ್ನುತ್ತಿದ್ದಾರಲ್ಲ ?

ಕಳೆದ 10 ವರ್ಷಗಳಲ್ಲಿ ನಿಮ್ಮ ಸಾಧನೆ ಏನು, ಇದ್ದರೆ ಒಂದು ಸಾಧನೆಯನ್ನಾದರೂ ಹೇಳಿ. ರೈಲು ಬಿಟ್ಟಿದ್ದೇ ಸಾಧನೆ. ವಿಎಸ್ ಎಲ್ ಹಾಳಾಗಿದ್ದು ಯಾರಿಂದ? ಎಂಪಿಎಂ ಹಾಳು ಮಾಡಿದ್ದು ಯಾರು ? ಸಾಯಿ ಎಕ್ಸ್‌ಪೋರ್ಟ್‌ ಮಾಡಿದ್ದು ಕಾಗೋಡು ತಿಮ್ಮಪ್ಪ ಅವರೇ ಹೊರತು ನೀವಲ್ಲ

*ವಿಎಸ್ ಎಲ್ ಮತ್ತು ಎಂಪಿಎಂ ಪುನಶ್ಚೇತನ ಮಾಡುತ್ತೀರಾ..?

ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನ ನೀಡಿ ಪುನಶ್ಚೇತನ ಮಾಡಬೇಕಿದೆ. ಎಂಪಿಎಂಗೆ ಅರಣ್ಯ ಇಲಾಖೆ ಕ್ಲಿಯರೆನ್ಸ್ ಮತ್ತು ಅನುದಾನ ನೀಡಿದರೆ ಸಮಸ್ಯೆ ಇತ್ಯರ್ಥವಾಗುತ್ತದೆ. ವಿಎಸ್ಎನ್ ಎಲ್ ಗೆ ಅನುದಾನ ಹಾಗೂ ಗಣಿಗಾರಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ, ಆದರೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಎರಡು ಪ್ರಮುಖ ಸಂಸ್ಥೆಗಳು ಶಿವಮೊಗ್ಗ ಜಿಲ್ಲೆಯ ಕಣ್ಣುಗಳಿದ್ದಂತೆ. ಅವುಗಳನ್ನು ಬಿಜೆಪಿಯವರೇ ಹಾಳು ಮಾಡಿದ್ದಾರೆ. ಕೇಂದ್ರದಲ್ಲಿ ಸರ್ಕಾರ ಹಾಗೂ ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆ ಬಗೆಹರಿಸುತ್ತೇವೆ.

• ಸಚಿವ ಡಿ.ಕೆ.ಶಿವಕುಮಾರ್ ಅವರು ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಶಿವಮೊಗ್ಗಕ್ಕೆ ಬಂದಿದ್ದಾರೆಯೇ ?

ಡಿ.ಕೆ.ಶಿವಕುಮಾರ್ ಅವರು ಕಟ್ಟಿಹಾಕಲಿಕ್ಕೆ ಬಂದಿಲ್ಲ. ಮಧು ಅವರನ್ನು ಗೆಲ್ಲಿಸಲು ಬಂದಿದ್ದಾರೆ.

• ಸಚಿವ ಡಿ.ಕೆ.ಶಿವಕುಮಾರ್ ಶಿವಮೊಗ್ಗಕ್ಕೆ ಬಂದಾಕ್ಷಣ ಬದಲಾವಣೆ ಆಗಲಿದೆ ಎಂದು ನಿಮ್ಮ ಆಪ್ತರೇ ಹೇಳುತ್ತಿದ್ದಾರೆ..?

ಅವೆಲ್ಲಾ ಸುಳ್ಳು, ಸಚಿವ ಡಿ.ಕೆ. ಶಿವಕುಮಾರ್ ಬಗ್ಗೆ ಹೇಳುವುದೆಲ್ಲ ರೂಮರ್ಸ್ ಅಷ್ಟೇ...

• ಶಿವಮೊಗ್ಗದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರೋಡ್ ಶೋ, ಸಮಾವೇಶಗಳ ಮೂಲಕ ಯುವ ಮತದಾರರನ್ನು ಸೆಳೆಯಲಿದ್ದಾರೆ.?

ಅವರ ಪಕ್ಷದ ಕೆಲಸ ಅವರು ಮಾಡಲಿ. ನಮ್ಮ ಪರವಾಗಿ ಎಚ್‌.ಡಿ. ದೇವೇಗೌಡರು, ಮುಖ್ಯಮಂತ್ರಿ ಪ್ರಚಾರ ನಡೆಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಶಿವಮೊಗ್ಗಕ್ಕೆ ಬರಲು ಸಾಧ್ಯವಾಗಿಲ್ಲ. ಕಳೆದ ಚುನಾವಣೆಯ ಕಾವು ಇನ್ನೂ ಇದೆ. ಅದರ ಲಾಭ ನಮಗಾಗಲಿದೆ. ಡಿಕೆಶಿ ಮತ್ತು ಸುರೇಶ್ ಇಬ್ಬರು ಬಂಗಾರಪ್ಪ ಅವರ ಋಣ ತೀರಿಸಲು ಬಂದಿದ್ದೇನೆ ಎಂದಿದ್ದಾರೆ.

• ಕೆಎಫ್‌ಡಿ ರೋಗ ಸಮಸ್ಯೆ ಬಗೆಹರಿಸುವುದು ಎಲ್ಲಿಗೆ ಬಂದಿದೆ.?

ಕೇಂದ್ರ ಸರ್ಕಾರದಿಂದ ಪ್ರಯೋಗಾಲಯ ತೆರೆಯಬೇಕು. ರಾಜ್ಯ ಸರ್ಕಾರವೂ ಈ ಬಗ್ಗೆ ನಿರ್ಲಕ್ಷ್ಯ ಮಾಡಿತು, ಸಮಸ್ಯೆ ಉಲ್ಬಣಿಸಿದಾಗ ಕ್ರಮ ಕೈಗೊಳ್ಳಲಿಲ್ಲ, ಅಷ್ಟರಲ್ಲೆ ಸಮಸ್ಯೆ ಉಲ್ಬಣಿಸಿತು. ಮುಖ್ಯಮಂತ್ರಿಗಳು 5 ಕೋಟಿ ರೂ. ಅನುದಾನ ಹಾಗೂ 10 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲು ಸಿದ್ಧರಿದ್ದಾರೆ. ಸತ್ತವರ ಕುಟುಂಬಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿಗಳು ಕಾಯ್ದೆಗೆ ತಿದ್ದುಪಡಿ ಮಾಡಲು ತೀರ್ಮಾನಿಸಿದ್ದಾರೆ.

ಯುಎನ್ಐ ಎಸ್ಎಂಆರ್ ಎಎಚ್‌ 1553

There is no row at position 0.