Thursday, Apr 25 2024 | Time 22:32 Hrs(IST)
Sports Share

ವಿಶ್ವಕಪ್: ಶಕೀಬ್ ಆಲ್ ರೌಂಡರ್ ಆಟಕ್ಕೆ ಅಫ್ಘಾನ್ ಕಂಗಾಲು

ಸೌತಾಂಪ್ಟನ್, ಜೂನ್ 24 (ಯುಎನ್ಐ)- ಆಲ್ ರೌಂಡರ್ ಶಕೀಬ್ ಅಲ್ ಹಸನ್ (51 ರನ್ ಹಾಗೂ 29ಕ್ಕೆ 5) ಅವರ ಭರ್ಜರಿ ಆಲ್ ರೌಂಡರ್ ಪ್ರದರ್ಶನದ ಬಲದಿಂದ ಬಾಂಗ್ಲಾದೇಶ ವಿಶ್ವಕಪ್ ನಲ್ಲಿ 62 ರನ್ ಗಳಿಂದ ಅಫ್ಘಾನಿಸ್ತಾನ್ ತಂಡವನ್ನು ಮಣಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ 50 ಓವರ್ ಗಳಲ್ಲಿ 7 ವಿಕೆಟ್ ಗೆ 262 ರನ್ ಕಲೆ ಹಾಕಿತು. ಸಾಧಾರಣ ಮೊತ್ತ ಹಿಂಬಾಲಿಸಿದ ಅಫ್ಘಾನ್ 47 ಓವರ್ ಗಳಲ್ಲಿ 200 ರನ್ ಗಳಿಗೆ ಸರ್ವಪತನ ಹೊಂದಿತು.
ಅಫ್ಘಾನ್ ಪರ ಬ್ಯಾಟಿಂಗ್ ಗೆ ಇಳಿದ ನಾಯಕ ಗುಲ್ಬದೀನ್ ನೈಬ್ ಹಾಗೂ ರಹಮತ್ ಶಾ ಅವರು ತಂಡಕ್ಕೆ ಸಾಧಾರಣ ಮೊತ್ತ ಕಲೆ ಹಾಕಿದರು. 10.5 ಓವರ್ ಗಳಲ್ಲಿ 49 ರನ್ ಕಲೆ ಹಾಕಿ ತಂಡಕ್ಕೆ ಚೇತರಿಕೆ ನೀಡಿದರು. ರಹಮತ್ 24 ರನ್ ಗಳಿಸಿ ಶಕೀಬ್ ಗೆ ವಿಕೆಟ್ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ಹಸ್ಮತುಲ್ಲಾ ಶಾಹೀದಿ 11 ರನ್ ಗಳಿಗೆ ಆಟ ಮುಗಿಸಿದರು.
ಅನುಭವಿ ಬ್ಯಾಟ್ಸ್ ಮನ್ ಅಸ್ಗರ್ ಅಫ್ಘಾನ್ (20) ಹಾಗೂ ಮೊಹಮ್ಮದ್ ನಬಿ (0) ಶಕೀಬ್ ಸ್ಪಿನ್ ಮೋಡಿ ಅರಿಯುವಲ್ಲಿ ವಿಫಲರಾದರು.
ಸಮಿಉಲ್ಲಾ ಶೆನ್ವಾರಿ ಅವರನ್ನು ಹೊರತು ಪಡಿಸಿದರೆ, ಬೇರ್ಯಾವ ಬ್ಯಾಟ್ಸ್ ಮನ್ ನೆಲಕಚ್ಚಿ ನಿಲ್ಲಲಿಲ್ಲ. ಶೆನ್ವಾರಿ 51 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಒಳಗೊಂಡಂತೆ 49 ರನ್ ಬಾರಿಸಿ ಅಜೇಯರಾಗುಳಿದರು.
ಬಾಂಗ್ಲಾ ಪರ ಶಕೀಬ್ 5, ಮುಷ್ತಾಫಿಜುರ್ 2, ಮೊಹಮ್ಮದ್ ಸೈಫುದ್ದಿನ್ 1 ವಿಕೆಟ್ ಪಡೆದು ಮಿಂಚಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಆರಂಭ ಕಳಪೆಯಾಗಿತ್ತು. ಬ್ಯಾಟಿಂಗ್ ನಲ್ಲಿ ಬಡ್ತಿ ಪಡೆದ ಲಿಟನ್ ದಾಸ್ ಕೇವಲ 16 ರನ್ ಗಳಿಗೆ ಆಟ ಮುಗಿಸಿದರು. ಎರಡನೇ ವಿಕೆಟ್ ಗೆ ತಮೀಮ್ ಇಕ್ಬಾಲ್ (36) ಹಾಗೂ ಅನುಭವಿ ಶಕೀಬ್ ಅಲ್ ಹಸನ್ ತಂಡವನ್ನು ಆಘಾತದಿಂದ ಪಾರು ಮಾಡುವ ಹೊಣೆಯನ್ನು ಹೊತ್ತುಕೊಂಡರು. ಈ ಜೋಡಿಯನ್ನು ಬೇರ್ಪಡಿಸಲು ಅಫ್ಘಾನ್ ಬೌಲರ್ ಗಳು ಕೊಂಚ ಬೆವರು ಹರಿಸಿದರು. ಈ ಜೋಡಿ 53 ರನ್ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾಯಿತು.

ಮೂರನೇ ವಿಕೆಟ್ ಗೆ ಶಕೀಬ್ ರನ್ನು ಸೇರಿಕೊಂಡ ಮುಷ್ಫೀಕರ್ ಉತ್ತಮ ಪ್ರದರ್ಶನ ನೀಡಿದರು. ಮಧ್ಯದ ಓವರ್ ಗಳಲ್ಲಿ ವಿಕೆಟ್ ಬೀಳದಂತೆ ಕಾಯ್ದುಕೊಳ್ಳುವಲ್ಲಿ ಈ ಜೋಡಿ ಯಶಸ್ವಿಯಾಯಿತು. 61 ರನ್ ಜೊತೆಯಾಟದ ಕಾಣಿಕೆ ನೀಡಿ ಮುನ್ನುಗುತ್ತಿದ್ದ ಜೋಡಿಯನ್ನು ಮುಜೀಬ್ ಬೇರ್ಪಡಿಸುವಲ್ಲಿ ಸಫಲರಾದರು. ಶಕೀಬ್ 51 ರನ್ ಬಾರಿಸಿ ಔಟಾದರು. ಸೌಮ್ಯ ಸರ್ಕಾರ್ ರನ್ ಕಲೆ ಹಾಕುವಲ್ಲಿ ವಿಫಲರಾದರು.

5ನೇ ವಿಕೆಟ್ ಗೆ ಮುಷ್ಫೀಕರ್ ಹಾಗೂ ಮೊಹಮದುಲ್ಲಾ (27) ತಂಡಕ್ಕೆ ಅರ್ಧಶತಕದ ಕಾಣಿಕೆ ನೀಡಿದರು. ಮುಷ್ಫೀಕರ್ 87 ಎಸೆತಗಳಲ್ಲಿ 83 ರನ್ ಬಾರಿಸಿ ಮಿಂಚಿದರು. ಮೊಸದೀಕ್ 35 ರನ್ ಬಾರಿಸಿದರು. ಅಫ್ಘಾನ್ ಮುಜೀಬ್ 3, ಗುಲ್ಬದೀನ್ ನೈಬ್ 2 ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ 50 ಓವರ್ ಗಳಲ್ಲಿ 7 ವಿಕೆಟ್ ಗೆ 262

(ಶಕೀಬ್ ಅಲ್ ಹಸನ್ 51, ಮುಷ್ಫೀಕರ್ ರಹೀಮ್ 83, ತಮೀಮ್ ಇಕ್ಬಾಲ್ 36, ಮುಜೀಬ್ 39ಕ್ಕೆ 3, ಗುಲ್ಬದೀನ್ 56ಕ್ಕೆ 2). ಅಫ್ಘಾನಿಸ್ತಾನ 47 ಓವರ್ ಗಳಲ್ಲಿ 200
(ಗುಲ್ಬದೀನ್ ನೈಬ್ 47, ಸಮಿಉಲ್ಲಾ ಶೆನ್ವಾರಿ ಅಜೇಯ 49, ಶಕೀಬ್ ಅಲ್ ಹಸನ್ 29ಕ್ಕೆ 5, ಮುಷ್ತಾಫಿಜುರ್ ರಹಮಾನ್ 32ಕ್ಕೆ2).
There is no row at position 0.