Friday, Mar 29 2024 | Time 11:25 Hrs(IST)
National Share

ಸಂಸತ್ತಿನ ಉಭಯ ಸದನಗಳಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ

ನವದೆಹಲಿ, ಜೂನ್ 24 (ಯುಎನ್ಐ) ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜೂನ್ 20 ರಂದು ಮಾಡಿದ್ದ ಭಾಷಣ ಮೇಲಿನ ವಂದನಾ ನಿರ್ಣಯ ಕುರಿತು ಲೋಕಸಭೆಯಲ್ಲಿ ಸೋಮವಾರ ನಡೆದ ಚರ್ಚೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಕಲಹ ಏರ್ಪಟ್ಟಿತ್ತು.
ಆಡಳಿತಾರೂಢ ಪಕ್ಷದ ಸದಸ್ಯರು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಕುರಿತು ಹೊಗಳಿಕೆಗಳ ಸುರಿಮಳೆಗೈದು 2014 ರಿಂದ 2019 ರ ಕಾರ್ಯವೈಖರಿಯ ಮೆಚ್ಚಿ ಜನರು ಗೆಲ್ಲಿಸಿದ್ದಾರೆ ಎಂದರು.
ಮೊದಲು ಚರ್ಚೆ ಆರಂಭಿಸಿದ ನೂತನ ಸಂಸದ ಪ್ರತಾಪ್ ಚಂದ್ರ ಸಾರಂಗಿ ನರೇಂದ್ರ ಮೋದಿ ವಿರೋಧ ಪಕ್ಷಗಳು ರಫೇಲ್ ವಿಚಾರ ಎತ್ತಿದವು ಎಂದು ಹೇಳಿದರು.
ಪಶುಸಂಗೋಪನಾ ಖಾತೆ ರಾಜ್ಯ ಸಚಿವರೂ ಆಗಿರುವ ಪ್ರತಾಪ್ ಚಂದ್ರ ಸಾರಂಗಿ, ವಿರೋಧ ಪಕ್ಷಗಳು ಆಡಳಿತಾರೂಢ ಸರ್ಕಾರದ ಬಗೆಗೆ ನಕಾರಾತ್ಮಕ ಪ್ರಚಾರ ನೀಡಿದರೂ ಕೂಡ ಪ್ರಧಾನಿ ಮೋದಿ ಶಾಂತಿವಾಗಿದ್ದು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ತಮ್ಮ ಗುರಿ ಸಾಕಾರದತ್ತ ಮುನ್ನುಗ್ಗಿದರು ಎಂದರು.
ಸಂಸ್ಕೃತ ಶ್ಲೋಕಗಳು, ಬಂಗಾಳಿ ಹಾಗೂ ಹಿಂದಿಯ ನಾಣ್ನುಡಿಗಳನ್ನು ಯಥೇಚ್ಛವಾಗಿ ಉಲ್ಲೇಖಿಸಿ, ರಾಮಾಯಣದ ದೃಷ್ಟಾಂತಗಳನ್ನು ವಿವರಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಒಳ್ಳೆಯ ಕಾರ್ಯಗಳನ್ನು ಪ್ರತಿಪಕ್ಷಗಳು ಅದರಲ್ಲೂ ಕಾಂಗ್ರೆಸ್ ಪ್ರಶಂಸಿಸಬೇಕು ಎಂದು ಸಲಹೆ ನೀಡಿದರು.
ಸಾರಂಗಿ ಭಾಷಣದ ವೇಳೆ ಸದನದಲ್ಲಿ ಹಾಜರಿದ್ದ ಪ್ರಧಾನಿ ಮೋದಿ ಹಲವು ಭಾರಿ ಅವರತ್ತ ನಗೆ ಬೀರಿ ಮೆಚ್ಚುಗೆ ಸೂಚಿಸಿದರು. 1971ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ಅಂದಿನ ದಿನಗಳಲ್ಲಿ ಪ್ರತಿಪಕ್ಷದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಕೊಂಡಾಡಿದ್ದನ್ನು ಸ್ಮರಿಸಿದರು.
ಸರ್ಕಾರದ ಒಳ್ಳೆಯ ಕೆಲಸಗಳನ್ನು ಪ್ರಶಂಸಿಸುವುದು ಪ್ರತಿಪಕ್ಷದ ಕರ್ತವ್ಯ ಆದರೆ, ಈಗಿನ ಪ್ರತಿಪಕ್ಷಗಳು ಅದನ್ನು ಒಮ್ಮೆಯೂ ಮಾಡುವುದಿಲ್ಲ ಏಕೆ ಎಂದು ಅಚ್ಚರಿಯಿಂದ ಸಾರಂಗಿ ಪ್ರಶ್ನಿಸಿದರು.
ಕನಿಷ್ಟ ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹೇಳುವ ಮೂಲಕ, ಚುನಾವಣೆಯಲ್ಲಿ ಹಿನಾಯ ಸೋಲು ಅನುಭವಿಸಿರುವ ಕಾಂಗ್ರೆಸ್ ಸದಸ್ಯರಿಗೆ ಸಲಹೆ ನೀಡುವ ಮೂಲಕ ತಿವಿದರು.
ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸೋಲು ನಿಶ್ಚಿತ ಎಂಬುದನ್ನು ಮೊದಲೇ ಅರಿತು, ಸುರಕ್ಷಿತ ಕ್ಷೇತ್ರಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳಕ್ಕೆ ತೆರಳಿದ್ದರು ಎಂಬ ಸಾರಂಗಿ ಅವರ ಮಾತಿನ ತಿವಿತಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ತಮ್ಮ ಮೃದು ಮಾತಿನ ಮೂಲಕವೇ ಯುಪಿಎ ಆಡಳಿತದ 2 ಜಿ ತರಂಗಾಂತರದಂತಹ ಭ್ರಷ್ಟಾಚಾರ ಹಗರಣಗಳನ್ನು ಪ್ರಸ್ತಾಪಿಸಿದ ಸಾರಂಗಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ “ಆಕಸ್ಮಿಕ ಪ್ರಧಾನ ಮಂತ್ರಿ” ಯಾಗಿಯೇ ಹೆಚ್ಚು ಜನಪ್ರಿಯರು ಎಂದು ಲೇವಡಿ ಮಾಡಿದರು
ನಮ್ಮ ಪ್ರಧಾನಿ ನರೇಂದ್ರಮೋದಿ, ದೇಶದ ಪ್ರಧಾನ ಸೇವಕ ಎಂದು ಹೇಳಿದ್ದರಿಂದಲೇ ದೇಶದ ಜನರು ಬಿಜೆಪಿಗೆ ಮತಹಾಕಿದ್ದಾರೆ. ಸಭ್ ಕಾ ಸಾತ್, ಸಬ್ಕಾ ವಿಕಾಸ್ ಹಾಗೂ ಸಬ್ಕಾ ವಿಶ್ವಾಸ್ ಘೋಷಣೆಗಳಲ್ಲಿ ಭಾರತೀಯ ಪುರಾತನ ಚಂತನೆಯಾದ ಎಲ್ಲರನ್ನೂ ಒಳಗೊಳ್ಳವಿಕೆಯ ಸ್ಪೂರ್ತಿ ಮೇಳೈಸಿದೆ ಎಂದರು.
ಭಾಷಣದ ವೇಳೆ ಸಾರಂಗಿ, ತೃಣಮೂಲ ಕಾಂಗ್ರೆಸ್ ಸದಸ್ಯರೊಂದಿಗೆ ಹಲವು ಬಾರಿ ವಾಗ್ವಾದ ನಡೆಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜೂನ್ 20 ರಂದು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣ ಐತಿಹಾಸಿಕ ದಾಖಲೆ ಎಂದು ಸಾರಂಗಿ ಬಣ್ಣಿಸಿದರು.
ಸಾರಂಗಿ ಅವರು ಮಂಡಿಸಿದ ವಂದನಾ ನಿರ್ಣಯವನ್ನು ಮತ್ತೊಬ್ಬ ಮಹಾರಾಷ್ಟ್ರ ನಂದೂರಬಾರ್ ಲೋಕಸಭಾ ಕ್ಷೇತ್ರದ ಸಂಸದ ಹೀನಾ ಗವಿಟ್ ಅನುಮೋದಿಸಿದರು.
ಮೋದಿ ಸರ್ಕಾರದ ಉತ್ತಮ ಸಾಧನೆ ಕಾಂಗ್ರೆಸ್ ಅನ್ನು ವಿಚಲಿತಗೊಳಿಸಿದೆ ಎಂದು ಬಿಜೆಪಿಯ ರೀಟಾ ಬಹುಗುಣ ಜೋಶಿ ಹೇಳಿದರು.
ಯುಪಿಎ ವಿರುದ್ಧದ ಬಿಜೆಪಿ ಆರೋಪಗಳಿಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ತಿರುಗೇಟು ನೀಡಿದೆ. ತನ್ನ ಗುರಿಗಳನ್ನು ಜನರಿಗೆ ಮುಟ್ಟಿಸುವಲ್ಲಿ ವಿಫಲವಾದ ಕಾರಣ ಪಕ್ಷ ಸೋಲನುಭವಿಸಬೇಕಾಯಿತು ಎಂದು ಚೌಧರಿ ಹೇಳಿದ್ದಾರೆ. ಪ್ರಧಾನಿ ಅತಿ ದೊಡ್ಡ ಮಾರಾಟಗಾರರಾಗಿದ್ದು, ಕಾಂಗ್ರೆಸ್ ತಮ್ಮ ಉತ್ಪನ್ನವನ್ನು ಮಾರಲಾಗಲಿಲ್ಲ. ಹೀಗಾಗಿ ಸೋಲಬೇಕಾಯಿತು ಎಂದು ಅವರು ಹೇಳಿದರು.
ತೃಣಮೂಲ ಕಾಂಗ್ರೆಸ್ ಪಕ್ಷದ ಸೌಗತಾ ರಾಯ್ ವಿದ್ಯುನ್ಮಾನ ಮತಯಂತ್ರ ಇವಿಎಂ ಬಳಕೆ ನಿಲ್ಲಬೇಕು ಎಂದು ಆಗ್ರಹಿಸಿದರು. ಬಹುಜನ ಸಮಾಜ ಪಕ್ಷದ ಡ್ಯಾನಿಷ್ ಅಲಿ ಸಹ ಇವಿಎಂ ವಿಶ್ವಾಸಾರ್ಹತೆ ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರೋಧ ವ್ಯಕ್ತಪಡಿಸಿ, ಚುನಾವಣಾ ಆಯೋಗವನ್ನು ಪ್ರಶ್ನಿಸಲಾಗುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ನಿರಂತರವಾಗಿ ಪ್ರಗತಿಗೆ ಪೂರಕ ಕ್ರಮಗಳನ್ನು ಕೈಗೊಂಡಿತ್ತು. ಆದರೆ ದಿಢೀರನೆ ಒಂದು ದಿನ ಯಾರೋ ಒಬ್ಬರು ಕಾಂಗ್ರೆಸ್ ಏನನ್ನೂ ಮಾಡಿಲ್ಲ, ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಮಾಡಿದೆ ಎಂದರು. ಇದು ಸತ್ಯ ತಿರುಚುವ ಪ್ರಯತ್ನ ಎಂದು ರಾಯ್ ಹೇಳಿದರು.
ಪಶ್ಚಿಮ ಬಂಗಾಳದ ಬಹ್ರಾಂಪುರ ಸಂಸದ ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳ ಪೈಕಿ 23 ಯೋಜನೆಗಳಿಗೆ ಮರುನಾಮಕರಣ ಮಾಡಲಾಗಿದೆ ಎಂದು ದೂರಿದರು.
ನೋಟು ಅಮಾನ್ಯ, ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿ ಹೇರಿಕೆಯಿಂದ ಜನರಿಗೆ ತೊಂದರೆಯಾಗಿದೆ ಎಂದು ಹುರುಳಿಲ್ಲದ ಆರೋಪ ಮಾಡಲಾಯಿತು ಎಂದು ಸಾರಂಗಿ ಹೇಳಿದರು.
ಇನ್ನು ರಾಜ್ಯಸಭೆಯಲ್ಲೂ ಕೂಡ ನರೇಂದ್ರ ಮೋದಿ ಅವರು ಆರೋಪಗಳಿಗೆ ಹೆದರಲಿಲ್ಲ ಎಂದು ಬಿಜೆಪಿ ಪ್ರತಿಪಾದಿಸಿತು. ಕಳೆದ ಐದು ವರ್ಷಗಳಲ್ಲಿ ರಾಜ್ಯಸಭೆಯಲ್ಲಿ ಕಲಾಪಗಳಿಗೆ ನಿರಂತರ ಅಡ್ಡಿಯಂಟಾಗಿದ್ದರೂ ಜನರು ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದಿದ್ದಾರೆ ಎಂದಿರುವ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ, ಪ್ರತಿಪಕ್ಷಗಳು ಈ ಕುರಿತಂತೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣ ಮೇಲಿನ ವಂದನಾ ನಿರ್ಣಯ ಮಂಡಿಸಿ ಮಾತನಾಡಿದ ಅವರು, ಸಂಸತ್‌ನಲ್ಲಿ ಪ್ರತಿಪಕ್ಷಗಳಿಂದ ಕಲಾಪಗಳಿಗೆ ಅಡ್ಡಿಯುಂಟಾಗಿದ್ದರೂ, ಬಿಜೆಪಿ ಭಾರೀ ಜನಾದೇಶದೊಂದಿಗೆ ಅಧಿಕಾರಕ್ಕೆ ಮರಳಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದು ಹೇಗೆ ಎಂಬ ಬಗ್ಗೆ ಪ್ರತಿಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ನರೇಂದ್ರಮೋದಿ ಪ್ರಧಾನಿಯಾದ ನಂತರ ಜಗತ್ತು ಭಾರತವನ್ನು ಹೆಚ್ಚು ಗೌರವದಿಂದ ನೋಡಲಾರಂಭಿಸಿದೆ ಎಂದು ಅವರು ಹೇಳಿದರು.
'ಈ ಮೊದಲು ಭಾರತ ವಿಶ್ವ ವೇದಿಕೆಯಲ್ಲಿ ಕೇವಲ ಪ್ರೇಕ್ಷಕ ರಾಷ್ಟ್ರವೆನಿಸಿತ್ತು. ಆದರೆ, ಮೋದಿಯವರ ನೇತೃತ್ವದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಭಾರತ ಪ್ರಮುಖ ದೇಶವಾಗಿ ಮಾರ್ಪಟ್ಟಿದೆ. ವಿಶ್ವಸಂಸ್ಥೆ ಮಹಾ ನಿರ್ದೇಶಕರೇ ಸ್ವತಃ ಭಾರತಕ್ಕೆ ಬಂದು ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿಯನ್ನು ಪ್ರಧಾನ ಮಂತ್ರಿಗೆ ನೀಡಿದ್ದಾರೆ. ಇದಕ್ಕಿಂತ ನಿದರ್ಶನ ಬೇಕಾಗಿಲ್ಲ.' ಎಂದು ನಡ್ಡಾ ಹೇಳಿದ್ದಾರೆ.
ಎನ್‌ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಂತರ ಜೂನ್‌ 18ರಿಂದ ಆರಂಭವಾಗಿರುವ ಸಂಸತ್ ಬಜೆಟ್‌ ಅಧಿವೇಶನದಲ್ಲಿ ಜೂನ್‌ 20ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ್ದರು.
ಯುಎನ್ಐ ಜಿಎಸ್‌ಆರ್ ವಿಎಲ್ಎನ್ 2313
There is no row at position 0.