Friday, Apr 26 2024 | Time 09:26 Hrs(IST)
Special Share

ಭಾರತ, ಬಡತನ ಮುಕ್ತ ದೇಶವಾಗಲು ನ್ಯಾಯ್‌ ಯೋಜನೆ ನೆರವಾಗಲಿದೆ-ಮನ್‌ಮೋಹನ್‌ ಸಿಂಗ್

ನವದೆಹಲಿ ಏ 20 (ಯುಎನ್‌ಐ)- ಕಾಂಗ್ರೆಸ್‌ನ ಉದ್ದೇಶಿತ 'ನ್ಯಾಯ್‌' ಯೋಜನೆಯು ದೇಶದ ಆರ್ಥಿಕತೆಗೆ ಹೊಸ ದಿಕ್ಕು ದೊರೆಯಲಿದ್ದು, ಬಡತನ ಮುಕ್ತ ದೇಶಗಳ ಪೈಕಿ ಭಾರತ ಒಂದಾಗಲು ನೆರವಾಗಲಿದೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ, ಆರ್ಥಿಕ ತಜ್ಞ, ಮಾಜಿ ಪ್ರಧಾನಿ, ಡಾ.ಮನಮೋಹನ್‌ ಸಿಂಗ್‌ ಹೇಳಿದ್ದಾರೆ.
'1991ರಲ್ಲಿ ಜನರಿಗೆ ದುಡಿಯುವ ಹಕ್ಕು ಸೇರಿದಂತೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ತೆಗೆದುಕೊಳ್ಳಲಾದ ಅನೇಕ ನಿರ್ಧಾರಗಳಂತೆ, 2019ರಲ್ಲಿ ರಚನೆಯಾಗಲಿರುವ ಕಾಂಗ್ರೆಸ್ ಸರ್ಕಾರ ಸಹ ಸಾಮಾಜಿಕ ನ್ಯಾಯ ಮತ್ತು ಉತ್ತಮ ಆರ್ಥಿಕತೆ ನೀಡುವಲ್ಲಿ ಯಶಸ್ವಿಯಾಗಲಿದೆ. ನ್ಯಾಯ್‌ ಯೋಜನೆಯಿಂದ ಭಾರತ, ಬಡತನ ಮುಕ್ತ ರಾಷ್ಟ್ರಗಳ ಗುಂಪಿಗೆ ಸೇರಲಿದೆ ಎಂಬ ಪ್ರಾಮಾಣಿಕ ನಂಬಿಕೆ ತಮಗಿದೆ. ಈ ಐತಿಹಾಸಿಕ ಮೈಲಿಗಲು ಸಾಧನೆ ನೋಡುವುದಕ್ಕೆ ಬದುಕಿರಬೇಕೆಂಬುದು ತಮ್ಮ ಇಚ್ಛೆಯಾಗಿದೆ' ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್‌ ಪಕ್ಷ ವಿತ್ತೀಯ ಶಿಸ್ತಿಗೆ ಬದ್ಧವಾಗಿದ್ದು, ಮಧ್ಯಮ ವರ್ಗದ ಮೇಲೆ ಯಾವುದೇ ಹೊಸ ತೆರಿಗೆ ವಿಧಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
'ನ್ಯಾಯ್‌ ಯೋಜನೆಗೆ ಜಿಡಿಪಿಯ ಶೇ.1.2ರಿಂದ ಶೇ.1.5ರಷ್ಟು ವೆಚ್ಚ ಮಾತ್ರ ತಗುಲಲಿದೆ. ಸುಮಾರು 3 ಟ್ರಿಲಿಯನ್‌ ಡಾಲರ್‌ನ ನಮ್ಮ ಆರ್ಥಿಕತೆಗೆ ಈ ವೆಚ್ಚ ಭರಿಸುವ ವಿತ್ತೀಯ ಸಾಮರ್ಥ್ಯ ಹೊಂದಿದೆ. ನ್ಯಾಯ್‌ ಯೋಜನೆಗೆ ಅನುದಾನ ಒದಗಿಸಲು ಮಧ್ಯಮ ವರ್ಗದ ಮೇಲೆ ಹೊಸ ತೆರಿಗೆ ಹಾಕುವ ಅಗತ್ಯವಿಲ್ಲ. ನ್ಯಾಯ್‌ ಯೋಜನೆಗೆ ಒದಗಿಸುವ ಆರ್ಥಿಕ ಅನುದಾನ, ವಿತ್ತೀಯ ಶಿಸ್ತನ್ನು ಹೆಚ್ಚಿಸಲಿದೆ. ತಜ್ಞರೊಂದಿಗ ಸಮಾಲೋಚಿಸಿ, ದೀರ್ಘವಾಗಿ ಯೋಚಿಸಿ ನ್ಯಾಯ್‌ ಯೋಜನೆಯನ್ನು ಜಾರಿಗೆ ತರಲಾಗುವುದು' ಎಂದು ಡಾ.ಸಿಂಗ್ ಹೇಳಿದ್ದಾರೆ.
' ಖಾಸಗಿ ಬಂಡವಾಳ ಹೂಡಿಕೆ ಮತ್ತು ಕೈಗಾರಿಕಾ ಉತ್ಪಾದನೆ ಕಡಿಮೆಯಾಗಿರುವ ಸಮಯದಲ್ಲಿ ನ್ಯಾಯ್‌ ಯೋಜನೆಯಿಂದ ಆರ್ಥಿಕತೆ ಸರಿ ದಾರಿಗೆ ಬಂದು, ಹೊಸ ಕೈಗಾರಿಕೆಗಳು ಮತ್ತು ಉದ್ಯೋಗಗಳು ಸೃಷ್ಟಿಯಾಗಲಿವೆ. ಸ್ಥಗಿತಗೊಂಡಿರುವ ಆರ್ಥಿಕತೆ, ವೇಗ ಪಡೆಯಲಿದೆ. ಬಡವರ ಕೈಯಲ್ಲಿ ಹಣವಿದ್ದರೆ, ಆರ್ಥಿಕತೆಯಲ್ಲಿ ಬೇಡಿಕೆ ಹೆಚ್ಚಾಗಲಿದೆ. ಇದು ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲು ಹಾಗೂ ಉದ್ಯೋಗ ಸೃಷ್ಟಿಯಾಗಲು ನೆರವಾಗಲಿದೆ. ಇದು, ಆರ್ಥಿಕ ತಜ್ಞರು ಉಲ್ಲೇಖಿಸುವ ಕೀನೆಸಿಯನ್‌ ಪರಿಣಾಮ' ಎಂದು ಅವರು ಹೇಳಿದ್ದಾರೆ.
ಮಾರ್ಚ್ 25ರಂದು ರಾಹುಲ್‌ ಗಾಂಧಿ ಪ್ರಕಟಿಸಿರುವ ನ್ಯಾಯ್‌ ಯೋಜನೆ, ಪ್ರಬಲ ಆಲೋಚನೆಯಾಗಿದ್ದು, ಸ್ಥಗಿತಗೊಂಡಿರುವ ಆರ್ಥಿಕತೆ ಚುರುಕುಗೊಳ್ಳಲು ಹಾಗೂ ಬಡತನ ನಿರ್ಮೂಲನೆಗೊಳಿಸುವ ಉದ್ದೇಶವನ್ನು ಹೊಂದಿದೆ. ನ್ಯಾಯ್‌ ಯೋಜನೆಯಡಿ ದೇಶದ ಒಟ್ಟು ಜನಸಂಖ್ಯೆಯ ಶೇ.20ರಷ್ಟಿರುವ ಬಡವರಿಗೆ ವಾರ್ಷಿಕ 72,000 ಸಾವಿರ ರೂ. ನೀಡಲಾಗುವುದು. ಈ ಯೋಜನೆಯನ್ನು ಜನರು ಉತ್ಸಾಹದಿಂದ ಸ್ವಾಗತಿಸುವ ನಿರೀಕ್ಷೆಯಿದೆ. ದೇಶದೆಲ್ಲೆಡೆ ಈ ಯೋಜನೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. 1947ರಲ್ಲಿ ಬ್ರಿಟೀಷರಿಂದ ಭಾರತ ಸ್ವಾತಂತ್ರ್ಯ ಪಡೆದಾಗ ದೇಶದಲ್ಲಿ ಶೇ.70ರಷ್ಟು ಬಡವರಿದ್ದರು ಎಂದು ಡಾ. ಸಿಂಗ್‌ ಹೇಳಿದ್ದಾರೆ.
ಯುಎನ್‌ಐ ಎಸ್‌ಎಲ್‌ಎಸ್‌ ಕೆವಿಆರ್ 2033
'
There is no row at position 0.